ಆರೋಗ್ಯಕ್ಕಾಗಿ ವೇಗ:
- ganesh296
- Jul 29, 2025
- 1 min read
ವೇಗವಾದ ಜೀವನದಲ್ಲಿ ವೇಗಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ವೇಗವೆಂದರೆ “ನಿತ್ಯಕರ್ಮಗಳು (Natural urges)”. ಇದರಲ್ಲಿ ಎರಡು ವಿಧ - ಧಾರಣೀಯ ಮತ್ತು ಅಧಾರಣೀಯ ವೇಗಗಳು. ಸಾಮಾನ್ಯವಾಗಿ ಮೂತ್ರವೇಗವನ್ನು ಧಾರಣೆ ಮಾಡುತ್ತಾರೆ ಹಾಗು ಕೋಪವನ್ನು ಎಲ್ಲರ ಮೇಲೆ ಹರಿಬಿಡುತ್ತಾರೆ. ಇದು ಸರಿಯೇ?
ಧಾರಣೀಯ ವೇಗಗಳೆಂದರೆ - ಯಾವ ವೇಗಗಳನ್ನು ತಡೆಯಬಹುದೊ ನಿಯಂತ್ರಿಸಬಹುದೊ ಅದು.
ಇದರಲ್ಲಿ
ಮಾನಸಿಕ ವೇಗಗಳಾದ “ಲೋಭ, ಶೋಕ, ಭಯ, ಕ್ರೋಧ (ಕೋಪ), ನಿರ್ಲಜ್ಜೆ, ಈರ್ಷ್ಯೆ ಮತ್ತು ರಾಗ.”
ವಾಚಿಕ ವೇಗಗಳಾದ “ಅತಿಮಾತು, ಇನ್ನೊಬ್ಬರಿಗೆ ನೋವುಂಟು ಮಾಡುವಂತದ್ದು, ಒರಟುಮಾತು, ಸುಳ್ಳು ಮತ್ತು ಅನಾವಶ್ಯಕ ಮಾತು.”
ಕಾಯಿಕ ವೇಗಗಳಾದ “ಇನ್ನೊಬ್ಬರಿಗೆ ನೋವುಂಟುಮಾಡುವುದು, ಹಿಂಸಿಸುವುದು ಮತ್ತು ಅತಿಯಾದ ಆಸೆ.”
ಇವುಗಳನ್ನು ನಿಯಂತ್ರಿಸುವುದರಿಂದ ಧರ್ಮ, ಅರ್ಥ ಮತ್ತು ಕಾಮಗಳು ದೊರೆಯುತ್ತದೆ. ಹಾಗು ಮಾನಸಿಕವಾಗಿಯು ನೆಮ್ಮದಿಯಿರುತ್ತದೆ. ಸಾತ್ವಿಕತೆ ಮತ್ತು ಸಕಾರತ್ಮಕ ಚಿಂತನೆಗಳು ಹೆಚ್ಚುತ್ತದೆ. ಸಂಭಂದಗಳಲ್ಲಿ ಶಾಂತಿಯಿರುತ್ತದೆ.
ಅಧಾರಣೀಯ ವೇಗಗಳೆಂದರೆ – ಯಾವ ವೇಗಗಳನ್ನು ತಡೆಯಬಾರದೊ/ನಿಯಂತ್ರಿಸಬಾರದೊ ಅದು.
ಇದರಲ್ಲಿ
ಮೂತ್ರ, ಮಲ, ಕಾಮೊದ್ವೇಗ, ಅದೊವಾತ (flatus), ವಾಂತಿ, ಸೀನು, ತೇಗು, ಆಕಳಿಕೆ, ಹಸಿವು, ಬಾಯಾರಿಕೆ, ಅಳು, ನಿದ್ರೆ ಮತ್ತು ಶ್ರಮದಿಂದ ಬರುವ ಶ್ವಾಸ. ಇವುಗಳನ್ನು ತಡೆಯುವುದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತೇವೆ.
ಮೂತ್ರ:
ಮೂತ್ರವೇಗ ಧಾರಣೆಮಾಡುವುದರಿಂದ ಮೂತ್ರಕೋಶದಲ್ಲಿ ನೋವು, ಮೂತ್ರಕೃಚ್ರ, ತಲೆನೋವು, ದೇಹ ಬಾಗುವುದು ಮತ್ತು ಹೊಟ್ಟೆ ಉಬ್ಬರವಾಗುತ್ತದೆ.
ಮಲ:
ಹೊಟ್ಟೆನೋವು, ತಲೆನೋವು, ಮಲಬದ್ಧತೆ, ಅದೋವಾತ ಹೆಚ್ಚಾಗುತ್ತದೆ. ಹೊಟ್ಟೆನುಲಿತ, ಮೀನುಕಂಡದ ನೋವು ಮತ್ತು ಹೊಟ್ಟೆ ಉಬ್ಬರಗಳು ಕಾಣಿಸಿಕೊಳ್ಳುತ್ತದೆ.
ಅದೋವಾತ:
ಮಲಬದ್ಧತೆ, ಮೂತ್ರಬದ್ಧತೆ ಮತ್ತು ಅದೋವಾತ, ಹೊಟ್ಟೆ ಉಬ್ಬರ, ಮೈಕೈ ನೋವು, ಸುಸ್ತು ಮತ್ತು ಹೊಟ್ಟೆ ಸಂಬಂಧ ಕಾಯಿಲೆ ಉಂಟಾಗುತ್ತದೆ.
ವಾಂತಿ:
ಕೆರೆತ, ನವೇ ಗುಳ್ಳೆಗಳು, ದದ್ದುಗಳು, ಹಸಿವಿಲ್ಲದಿರುವಿಕೆ, ಮುಖದ ಬಣ್ಣಬದಲಾವಣೆ, ಊತ, ರಕ್ತಹೀನತೆ, ಜ್ವರ, ಕುಷ್ಠ, ಹೊಟ್ಟೆ ಹುಮ್ಮಳಿಸುವುದು (ವಾಕರಿಕೆ) ಮತ್ತು ವಿಸರ್ಪದಂತ ಕಾಯಿಲೆ ಉಂಟಾಗುತ್ತದೆ.
ಇದೆ ರೀತಿ ಒಂದೊಂದು ಅಧಾರಣೀಯ ವೇಗಗಳನ್ನು ನಿಯಂತ್ರಿಸುವುದರಿಂದ ಅದರದ್ದೆ ಆದ ತೊಂದರೆಗಳುಂಟಾಗುತ್ತದೆ. ಸಣ್ಣ ವಿಚಾರವೆನಿಸಿದರು ಸತತ ಅಭ್ಯಾಸದಿಂದ ದೊಡ್ಡ ಕಾಯಿಲೆ ಉಂಟಾಗುವ ಸಾದ್ಯತೆಗಳಿರುತ್ತದೆ. ಗಮನವಿರಲಿ ವೇಗವು ನಿಮ್ಮ ಜೀವನದ ವೇಗವನ್ನು ನಿಯಂತ್ರಿಸದಿರಲಿ.
- ಡಾ ಪ್ರಕೃತಿ ಟಿ ಎಸ್
ಆಯುರ್ವೇದ ವೈದ್ಯೆ
ವಂದೆ ಆಯುರ್ವೇದ ವೆಲ್ನೆಸ್ ಸೆಂಟರ್, ಮೈಸೂರು




Comments