ಊಟ ಬಲ್ಲವನಿಗೆ ರೋಗವಿಲ್ಲ
- Rohith C M
- Jul 8, 2025
- 1 min read
Updated: Jul 9, 2025
ಈಗಿನ ಬಿಡುವಿಲ್ಲದ ಜೀವನದಲ್ಲಿ ಜನರಿಗೆ ತಮ್ಮ ಆಹಾರ ಮತ್ತು ವಿಹಾರಗಳ ಬಗ್ಗೆ ಕಾಳಜಿವಹಿಸುವಷ್ಟು ಸಮಯವೆ ಇಲ್ಲದಂತಾಗಿದೆ. ಹಿಂದಿನವರು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.” ಎಂದು ಹೇಳುತಿದ್ದರು. ಅದರ ಅರ್ಥ ತಿಳಿಯುವಷ್ಟು ಪುರುಸೊತ್ತಿಲ್ಲದಂತಾಗಿದೆ. ವೈದ್ಯ ಜೀವನವೆಂಬ ಪುಸ್ತಕದಲ್ಲಿ ಒಂದು ಶ್ಲೋಕವಿದೆ “ಪಥ್ಯೆಸತಿ ಗದಾರ್ತಸ್ಯ ಕಿಂಮೌಷಧನಿಷೆವಣೈಃ | ಪಥ್ಯೆ-ಅಸತಿ ಗದಾರ್ತಸ್ಯ ಕಿಂಮೌಷಧನಿಷೆವಣೈಃ ||” ಇದರ ಅರ್ಥ “ಸರಿಯಾದ ಆಹಾರ ಶೈಲಿ ತಿಳಿದವನಿಗೆ ಔಷಧದ ಅವಶ್ಯಕತೆ ಏನು?, ಸರಿಯಾದ ಆಹಾರ ಸೇವಿಸದವನಿಗೆ ಔಷಧವೇಕೆ?”. ಆಯುರ್ವೇದದಲ್ಲಿ ಪಥ್ಯ ಎಂದರೆ “ಪಥಕ್ಕೆ ತೊಂದರೆ ಮಾಡದೆ ಇರುವಂತದ್ದು”. ಸರಿಯಾದ ರೀತಿಯಲ್ಲಿ ಚಯಾಪಚಯಗೊಂಡು ಬೇಕಾದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುವುದು.

ಈಗಿನ ಜೀವನದಲ್ಲಿ ಸಮಯದ ಅಭಾವದಿಂದ ತಿಂಡಿ, ಊಟವನ್ನು ಸೇವಿಸಲು ಸರಿಯಾಗಿ ೧೦ ನಿಮಿಷವಿರುವುದಿಲ್ಲ. ಶಾಲೆ, ಕಛೇರಿಗಳಿಗೆ ಹೋಗುವವರ ಕಥೆ ಇದಾದರೆ. ಮನೆಯಲ್ಲಿ ಹಗಲಿರುಳು ಕೆಲಸ ಮಾಡುವ ಹೆಂಗಸರು, ಎಲ್ಲ ಕೆಲಸ ಮುಗಿಯುವವರೆಗೆ ಒಂದು ಲೋಟ ಕಾಫಿ-ಟೀಯಲ್ಲೆ ತಮ್ಮೆಲ್ಲ ಪೌಷ್ಠಿಕಾಂಶಗಳನ್ನು ನಿರೀಕ್ಷಿಸುತ್ತಾರೆ. ವಿದ್ಯಾರ್ಥಿಗಳಿಗೆ ಫ಼ಾಸ್ಟ್ ಫ಼ುಡ್, ಚಾಟ್ಸ್, ಬೇಕರಿ ಐಟಮ್ಸ್ ಇತ್ಯಾದಿಗಳ ರುಚಿಯಿಂದ ಮನೆಯ ಆಹಾರ ರುಚಿಸುತ್ತಿಲ್ಲ. ಇದರ ಪರಿಣಾಮ, ಜೀವನ ಶೈಲಿಯಿಂದ ಬರುವಂತಹ ಕಾಯಿಲೆಗಳಾದ ಮಧುಮೇಹ, ಪೈಲ್ಸ್, ಥೈರೊಯ್ಡ್ ಗ್ರಂಥಿಯ ತೊಂದರೆ ಇತ್ಯಾದಿಗಳು ಹೆಚ್ಚುತ್ತಿದೆ. ಮೊದಲೆ ಹೇಳಿದಂತೆ ಪಥ್ಯವಿಲ್ಲದೆ ಔಷಧಿಯ ಸೇವನೆ ಮಾಡಿದರೆ ಯಾವುದೆ ಉಪಯೋಗವಿಲ್ಲ.
ಇದಕ್ಕೆ ಪರಿಹಾರವೇನು? ಆಹಾರವು ಒಬ್ಬ ವ್ಯಕ್ತಿಯ ಪ್ರಕೃತಿ, ಸಂಸ್ಕಾರ (ಆಹಾರದ), ಸಂಯೋಗ, ಪ್ರಮಾಣ, ದೇಶ, ಕಾಲ, ಉಪಯೋಗದ ನಿಯಮ ಮತ್ತು ಉಪಯೋಗಿಸುವವನ ಮೇಲೆ ಅವಲಂಭಿತವಾಗಿದೆ. ಜೊತೆಗೆ ಸೇವಿಸುವವರ ಮನಸ್ಥಿತಿ ಹಾಗು ಪರಿಸರವು ಮುಖ್ಯ. ಬಿಸಿಯಾಗಿ, ಸರಿಯಾದ ಪ್ರಮಾಣದಲ್ಲಿ ಹಾಗು ಸರಿಯಾದ ಪ್ರಮಾಣದ ತುಪ್ಪದ ಜೊತೆಗೆ ತಿನ್ನಬೇಕು. ಪ್ರಮುಖವಾಗಿ ಹಿಂದಿನ ಆಹಾರ ಪೂರ್ಣವಾಗಿ ಜೀರ್ಣವಾಗಿರಬೇಕು. ಇಷ್ಟವಾದ ಜಾಗದಲ್ಲಿ, ಇಷ್ಟೋಪಕರಣಗಳು ಹಾಗು ಇಷ್ಟವಾಗಿರುವವರ ಜೊತೆಗೆ, ಪೂರ್ಣವಾದ ಆಸಕ್ತಿಯೊಂದಿಗೆ ಸವಿಯಬೇಕು. ಹಾಗು ತಿನ್ನುವಾಗ ಮಾತನಾಡಬಾರದು ಹಾಗು ನಗಬಾರದು. ಅತಿ ವೇಗವಾಗಿ ಅಥವ ತುಂಬ ನಿಧಾನವಾಗಿಯು ತಿನ್ನಬಾರದು.
ಇದಕ್ಕೆ ಹಿಂದಿನವರು ಊಟಬಲ್ಲವನಿಗೆ ರೋಗವಿಲ್ಲವೆಂದಿರಬಹುದು. ನಿಮ್ಮ ನಿಮ್ಮ ದೇಹದ ಪ್ರಕೃತಿಗೆ ಹೊಂದುವಂತೆ, ಆದಷ್ಟು ಸಮತೋಲನದಿಂದ ಕೂಡಿದ ಪೌಷ್ಠಿಕಾಂಶ ಹಾಗು ಆರು ರಸ (ರುಚಿ- ಸಿಹಿ, ಉಪ್ಪು, ಹುಳಿ, ಖಾರ, ಕಹಿ ಹಾಗು ಒಗರು.)ಗಳನ್ನು ಹೊಂದಿದ ಆಹಾರ ಸೇವಿಸಿ. ತನುಮನಗಳ ಜೊತೆಗೆ ಆಹಾರ ಸವಿಯಿರಿ ಹಾಗು ಆತ್ಮತೃಪ್ತಿಯೊಂದಿರಿ.
- ಡಾ ಪ್ರಕೃತಿ ಟಿ ಎಸ್
ಆಯುರ್ವೇದ ವೈದ್ಯೆ
ವಂದೆ ಆಯುರ್ವೆದ ವೆಲ್ನೆಸ್ ಸೆಂಟರ್, ಮೈಸೂರು



Comments